ರಾಮಾನುಜಾಚಾರ್ಯ
1017-1137. ವಿಶಿಷ್ಟಾದ್ವೈತ ವೇದಾಂತದ ಪ್ರಮುಖ ಪ್ರತಿಪಾದಕರು. ಆಚಾರ್ಯಪರಂಪರೆಯ ಪ್ರಮುಖರಲ್ಲೊಬ್ಬರಾದ ಯಾಮುನಾಚಾರ್ಯರ (ನೋಡಿ- ಯಾಮುನಾಚಾರ್ಯ) ಶಿಷ್ಯ ಪರಂಪರೆಗೆ ಸೇರಿದವರು. ಮದರಾಸಿನ ಸಮೀಪದಲ್ಲಿರುವ ಶ್ರೀ ಪೆರುಂಬುದೂರಿನಲ್ಲಿ 1017ರಲ್ಲಿ ಜನನ. ತಂದೆ ಕೇಶವ ಸೋಮಯಾಜಿ (ಕೇಶವಾಚಾರ್ಯ), ತಾಯಿ ಕಾಂತಿಮತಿ. ಹದಿನೈದು ವರ್ಷಗಳಾದ ರಕ್ಷಾಂಬಾಳ್ ಎಂಬವರೊಂದಿಗೆ ರಾಮಾನುಜರ ವಿವಾಹವಾಯಿತು. ಇದೇ ಕಾಲದಲ್ಲಿ ತಂದೆ ತೀರಿಕೊಂಡರು. ವಿದ್ಯಾಭ್ಯಾಸವನ್ನು ಕಾಂಚೀಪುರದ ಅದ್ವೈತ ವಿದ್ವಾಂಸರಾದ ಯಾದವ ಪ್ರಕಾಶರಲ್ಲಿ ಪ್ರಾರಂಭಿಸಿದರು. ವೇದಾಂತದ ಅಧ್ಯಯನವನ್ನು ಮಾಡತೊಡಗಿದರು. ಆದರೆ ಯಾದವ ಪ್ರಕಾಶರಲ್ಲಿ ಬಹಳಕಾಲ ಅಧ್ಯಯನವನ್ನು ಮುಂದುವರಿಸಲಿಲ್ಲ. ಉಪನಿಷದ್ವಾಕ್ಯಗಳ ಅರ್ಥವನ್ನು ವಿವರಿಸುವಲ್ಲಿ ಇಬ್ಬರಲ್ಲೂ ಭಿನ್ನಾಭಿಪ್ರಾಯ ಉಂಟಾಯಿತು. ಯಾದವಪ್ರಕಾಶರ ಶಿಷ್ಯನಾಗಿ ಅಧ್ಯಯನ ಮಾಡುವುದನ್ನು ರಾಮಾನುಜರು ಬಿಟ್ಟರು. ಸ್ವತಂತ್ರವಾಗಿ ಯೋಚಿಸಲು ಆರಂಭಿಸಿದರು. 

	ರಾಮಾನುಜರು ಗೊಂದಲದಲ್ಲಿದ್ದಾಗಲೆಲ್ಲ ಅವರಿಗೆ ಧೈರ್ಯ ಮತ್ತು ವಿಶ್ವಾಸವನ್ನು ತುಂಬುತ್ತಿದ್ದರು ಕಾಂಚೀಪೂರ್ಣರು. ಶ್ರೀರಂಗದಲ್ಲಿ ಯಾಮುನಾಚಾರ್ಯರು ಆರೋಗ್ಯವಿಲ್ಲದೆ ತಮ್ಮ ಉತ್ತರಾಧಿಕಾರಿಗಾಗಿ ಶೋಧದಲ್ಲಿದ್ದಾಗ ರಾಮಾನುಜರ ಹೆಸರು ಅವರ ಕಿವಿಗೆ ಬಿತ್ತು. ಅವರನ್ನೇ ತಮ್ಮ ಮುಂದಿನ ಉತ್ತರಾಧಿಕಾರಿಯನ್ನಾಗಿ ಮಾಡಲು ಸಂಕಲ್ಪ ಮಾಡಿ ತಮ್ಮ ಮತ್ತೊಬ್ಬ ಶಿಷ್ಯರಾದ ಮಹಾಪೂರ್ಣ ಎಂಬವರನ್ನು ಕಳುಹಿಸಿ ರಾಮಾನುಜರನ್ನು ಶ್ರೀರಂಗಕ್ಕೆ ಕರೆಸಿಕೊಂಡರು. ಆದರೆ ರಾಮಾನುಜರು ಬರುವುದರೊಳಗೆ ಯಾಮುನಾಚಾರ್ಯರು ನಿಧನರಾಗಿದ್ದರು. ಅವರ ಮೂರು ಕೈಬೆರಳುಗಳು ಮಡಚಿಕೊಂಡಿದ್ದುವು. ಇವು ಯಾಮುನಾಚಾರ್ಯರ ಮೂರು ಮನೋರಥಗಳ ಸಂಕೇತವೆಂದು ರಾಮಾನುಜರು ತಿಳಿದು ನೆರೆದ ಜನಸ್ತೋಮದ ಎದುರಲ್ಲಿ ತಮ್ಮ ಗುರುಗಳ ಇಷ್ಟಾರ್ಥವನ್ನು ಈಡೇರಿಸುವುದಾಗಿ ತಿಳಿಸಿದರು. ಬ್ರಹ್ಮಸೂತ್ರಗಳಿಗೆ ವಿಶಿಷ್ಟಾದ್ವೈತಪರವಾದ ವ್ಯಾಖ್ಯಾನ ಬರೆಯುವುದು. ವಿಷ್ಣು ಸಹಸ್ರನಾಮದ ಭಾಷ್ಯ ಮತ್ತು ದಿವ್ಯಪ್ರಬಂಧಗಳಿಗೆ ಟೀಕೆ ಬರೆಯುತ್ತೇನೆಂದು ಪ್ರತಿಜ್ಞೆ ಮಾಡಿದರು. ಮಡಚಿಕೊಂಡಿದ್ದ ಯಾಮುನಾಚಾರ್ಯರ ಕೈಬೆರಳುಗಳು ತೆರೆದುಕೊಂಡವಂತೆ. ಇದು ಬ್ರಹ್ಮಸೂತ್ರಕ್ಕೆ ಹೊಸದೊಂದು ಭಾಷ್ಯವನ್ನು ಶ್ರೀವೈಷ್ಣವ ಸಿದ್ಧಾಂತದ ಪ್ರಕಾರ ಬರೆಯುವುದಕ್ಕೆ ನಾಂದಿಯಾಯಿತು.

	ಆಧ್ಯಾತ್ಮಿಕ ವಿಷಯಗಳಿಗೆ ಮನಸ್ಸಿಟ್ಟ ರಾಮಾನುಜರ ಮನೋಧರ್ಮದ ಸಲುವಾಗಿ ಅವರ ಮತ್ತು ಅವರ ಮಡದಿ ರಕ್ಷಾಂಬಾಳ್ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲದಾಯಿತು. ಹೆಂಡತಿಯ ಮನೋರಥವನ್ನು ಅರಿತ ಇವರು ಆಕೆಗೆ ಬೇಕಾದುದೆಲ್ಲವನ್ನು ನೀಡಿ ತವರಿಗೆ ಕಳುಹಿಸಿದರು. ಲೌಕಿಕವಾದ ಆಸೆ ಆಕಾಂಕ್ಷೆಗಳನ್ನು ತ್ಯಜಿಸಿ ಸಂನ್ಯಾಸಾಶ್ರಮ ಪ್ರವೇಶಿಸಿದರು. ರಾಮಾನುಜರಲ್ಲಿ ಮನಸೋತ ಹಲವರು ಶಿಷ್ಯತ್ವವನ್ನು ಪಡೆದರು. ಅನಂತರ ಇವರು ಕಾಂಚೀಪುರದ ಮಠಕ್ಕೆ ಬಂದು ನೆಲೆಸಿದರು. ಇದರಿಂದ ತತ್ತ್ವಪ್ರಸಾರಕ್ಕೆ ಹೆಚ್ಚಿನ ಅನುಕೂಲವೇ ಆಯಿತು.  ಕೆಲವು ದಿವಸಗಳ ಅನಂತರ ಕಾಂಚೀಪುರವನ್ನು ತ್ಯಜಿಸಿ ಶ್ರೀರಂಗಕ್ಕೆ ಬಂದು ಯಾಮುನಾಚಾರ್ಯರ ಮಠದ ಅಧಿಪತ್ಯವನ್ನು ವಹಿಸಿಕೊಂಡರು. ಗೋಷ್ಠೀಪೂರ್ಣರಿಂದ ಮಂತ್ರೋಪದೇಶವನ್ನು ಪಡೆದರು. ಗುರುಗಳಿಂದ ಪಡೆದ ಮಂತ್ರವನ್ನು ಗೋಪ್ಯವಾಗಿಡಬೇಕೆಂದು ನಿಯಮಿತವಾಗಿದ್ದರೂ ಜಗದೋದ್ಧಾರಕ್ಕಾಗಿ ದೇವಸ್ಥಾನದ ಗೋಪುರವನ್ನೇರಿ ನೆರೆದಿದ್ದ ಜನಸ್ತೋಮಕ್ಕೆ ಉಪದೇಶ ಮಾಡಿದರು.

	ಶ್ರೀರಂಗದ ಅರಸ ಕುಲೋತ್ತುಂಗ ಚೋಳರಾಜ ಶೈವಭಕ್ತನಾಗಿದ್ದ. ಈತ ರಾಮಾನುಜರ ವೈಷ್ಣವ ಸಿದ್ಧಾಂತ ಪ್ರಚಾರಕ್ಕೆ ಕೋಪಗೊಂಡ. ರಾಜನ ಕ್ರೋಧಕ್ಕೊಳಗಾದ ರಾಮಾನುಜರು ಶ್ರೀರಂಗವನ್ನು ತ್ಯಜಿಸಿ ಅಲ್ಲಿಂದ ಮೈಸೂರಿಗೆ ಬಂದರು. ಇವರಿಗೆ ಇಲ್ಲಿ ಭವ್ಯಸ್ವಾಗತ ದೊರೆಯಿತು. ಆಗ ಮೈಸೂರನ್ನು ಆಳುತ್ತಿದ್ದವ ಬಿಟ್ಟಿದೇವ. ಇವನಿಗೆ ಇಲ್ಲಿ ವೈಷ್ಣವಧರ್ಮದ ದೀಕ್ಷೆಯನ್ನು ನೀಡಿ ವಿಷ್ಣುವರ್ಧನ ಎಂಬ ಹೆಸರುಕೊಟ್ಟರು. ವಿಷ್ಣುವರ್ಧನ ರಾಮಾನುಜರ ಅಪೇಕ್ಷೆಯಂತೆ ಬೇಲೂರಿನಲ್ಲಿ ಚೆನ್ನಕೇಶವನ ಗುಡಿ. ತಲಕಾಡಿನಲ್ಲಿ ಕೀರ್ತಿನಾರಾಯಣ, ಗದಗಿನಲ್ಲಿ ವೀರನಾರಾಯಣ, ಮೇಲುಕೋಟೆಯಲ್ಲಿ ಚೆಲುವನಾರಾಯಣನ ಗುಡಿಗಳನ್ನು ಕಟ್ಟಿಸಿದ. ರಾಮಾನುಜರು ತಮ್ಮ ಪ್ರಯಾಣದ ಅವಧಿಯಲ್ಲಿ ಸಾಲಿಗ್ರಾಮ. ತೊಂಡನೂರುಗಳಿಗೆ (ತೊಣ್ಣೂರು) ಭೇಟಿನೀಡಿ ಅಲ್ಲೆಲ್ಲ ವಿಶಿಷ್ಟಾದ್ವೈತ ದರ್ಶನದ ಪ್ರಚಾರ ಕೈಗೊಂಡರು. ಬಳಿಕ ಮೇಲುಕೋಟೆಗೆ ಬಂದು ಅಲ್ಲಿ ಸುಮಾರು ಹದಿನಾಲ್ಕು ವರ್ಷಗಳ ಕಾಲ ನೆಲೆಸಿದ್ದು ಅನಂತರ ಶ್ರೀರಂಗಕ್ಕೆ ಹಿಂತಿರುಗಿದರು. ಅನೇಕ ವಿಷ್ಣುದೇವಾಲಯಗಳಲ್ಲಿ ಪಾಂಚರಾತ್ರ ಆಗ ಮಗಳ ಪ್ರಕಾರ ಪೂಜಾವಿಧಾನಗಳನ್ನು ಏರ್ಪಡಿಸಿದರು. ತಮ್ಮ ವ್ಯಾಖ್ಯಾನಗಳ ಮೂಲಕ ವಿಶಿಷ್ಟಾದ್ವೈತ ವೇದಾಂತವನ್ನು ಯಶಸ್ವಿಯಾದ ರೀತಿಯಲ್ಲಿ ಪ್ರಚಾರ ಮಾಡಿದರು.

	ರಾಮಾನುಜರು 1137ರಲ್ಲಿ ದೇಹತ್ಯಾಗ ಮಾಡಿದರು.

	ರಾಮಾನುಜಾಚಾರ್ಯರು ಪೂರ್ವಾಚಾರ್ಯರುಗಳ ಮಾರ್ಗವನ್ನು ಮನದಟ್ಟು ಮಾಡಿಕೊಂಡು ಬ್ರಹ್ಮಸೂತ್ರಗಳಿಗೂ ಭಗವದ್ಗೀತೆಗೂ ವಿಶಿಷ್ಟಾದ್ವೈತ ಪರವಾಗಿ ಭಾಷ್ಯ ರಚಿಸಿದರು. ಇದಲ್ಲದೆ ಅದಕ್ಕೆ ಸಿದ್ಧಾಂತರೂಪ ಕೊಟ್ಟು ಶ್ರೀವೈಷ್ಣವ ಸಂಪ್ರದಾಯವನ್ನೂ ಜೊತೆಜೊತೆಯಲ್ಲೇ ಪ್ರಚುರಪಡಿಸಿ ಪಂಡಿತಪಾಮರರೆಲ್ಲರ ಆತ್ಮೋಜ್ಜೀವನಕ್ಕೆ ಮಾರ್ಗದರ್ಶನ ಮಾಡಿದರು. ಇವರು ರಚಿಸಿದ ಗ್ರಂಥಗಳಲ್ಲಿ ಪ್ರಸಿದ್ಧವಾದವು ಇವು; ಶ್ರೀಭಾಷ್ಯ ಎಂಬುದು ಬ್ರಹ್ಮಸೂತ್ರಗಳಿಗೆ ಇರುವ ವಿಸ್ತಾರವ್ಯಾಖ್ಯಾನ. ವೇದಾಂತಸಾರ, ವೇದಾಂತದೀಪ ಎಂಬುವು ಅದೇ ಸೂತ್ರಗಳಿಗೆ ಸಂಗ್ರಹರೂಪದ ವ್ಯಾಖ್ಯಾನಗಳು. ಗೀತಾಭಾಷ್ಯ ಎಂಬುದು ಭಗವದ್ಗೀತೆಗೆ ವಿಶಿಷ್ಠಾದ್ವೈತಪರವಾದ ಭಾಷ್ಯ. ವೇದಾಂತಸಂಗ್ರಹ ಎಂಬುದು ಉಪನಿಷದ್ವಾಕ್ಯಗಳಿಗೆ ವಿಶಿಷ್ಟಾದ್ವೈತಪರವಾದ ಅರ್ಥವಿವರಣೆ, ಗದ್ಯತ್ರಯಗಳು ಎಂದು ಹೆಸರಾಗಿರುವ ಶ್ರೀರಂಗಗದ್ಯ, ಶರಣಾಗತಿಗದ್ಯ ಮತ್ತು ಶ್ರೀವೈಕುಂಠಗದ್ಯಗಳು ಆತ್ಮೋಜ್ಜೀವನ ಮಾಡಿಕೊಳ್ಳುವಲ್ಲಿ ನೆರವಾಗುವ ಸ್ತೋತ್ರಗಳು.

	ತಮ್ಮ ವಾದ ಸ್ವಕಪೋಲಕ್ಲಪಿತವಲ್ಲವೆಂದು ತೋರಿಸಲೂ ಅದು ಪ್ರಾಚೀನತಮವಾದುದೆಂದು ಸ್ಥಾಪಿಸಲೂ ತಮಗೆ ಪೂರ್ಣಾಚಾರ್ಯರಾಗಿದ್ದವರ ಹೆಸರುಗಳನ್ನು ಹೀಗೆ ಉಲ್ಲೇಖಿಸಿದ್ದಾರೆ: ಅಂಕ, ದ್ರಾವಿಡ, ಗುಹದೇವ, ಕಪರ್ದಿ, ಭಾರುಚಿ, ಬೋಧಯನ ಮೊದಲಾದವರು, ಇವರೊಡನೆ ಯಾಮುನಾಚಾರ್ಯರ ಉಪದೇಶಗಳಿಂದಲೂ ಆಳ್ವಾರರ ಪ್ರಬಂಧಗಳಿಂದಲೂ ರಾಮಾನುಜರು ಸ್ಫೂರ್ತಿ ಪಡೆದರು. ಆಚಾರ್ಯರ ಮತ್ತು ಆಳ್ವಾರರ ಉಪದೇಶಗಳನ್ನು ಸಮನ್ವಯಗೊಳಿಸಿದ ಇವರಿಗೆ ಉಭಯ ವೇದಾಂತ ಪ್ರವರ್ತಕ ಎಂಬ ಬಿರುದೂ ಬಂದಿದೆ.

	ರಾಮಾನುಜರ ತರುವಾಯ ಇವರ ಪಂಥ ಎರಡು ಶಾಖೆಗಳಾಗಿ ಒಡೆಯಿತು. ಈ ಶಾಖೆಗಳು ತೆಂಕಲೈ ಮತ್ತು ವಡಕಲೈ. ಈ ಶಾಖೆಗಳಿಗೆ ಪರಸ್ಪರ ಹದಿನೆಂಟು ಅಂಶಗಳಲ್ಲಿ ಸಿದ್ಧಾಂತಗತ ಭೇದಗಳಿವೆ. ತೆಂಕಲೈ ಮತದ ಪ್ರಧಾನ ಆಚಾರ್ಯರು ಶ್ರೀಪಿಳ್ಳೈ ಲೋಕಾಚಾರ್ಯರು (ಹದಿಮೂರನೆಯ ಶತಮಾನ). ವಡಕಲೈ ಮತದ ವಿಖ್ಯಾತ ಆಚಾರ್ಯರು ಲೋಕಾಚಾರ್ಯರ ಸಮಕಾಲೀನರೇ ಆದ ವೆಂಕಟನಾಥರು ಅಥವಾ ವೇದಾಂತ ದೇಶಿಕರು.
(ಎಂ.ವೈ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ